ಶಂಕರ್ ನಾಗ್ ಪತ್ನಿಗೆ ರು.21.6 ಲಕ್ಷ ನಷ್ಟಭರ್ತಿ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ರಂಗಭೂಮಿ ಕಲಾವಿದ ಶಂಕರ್ ನಾಗರಕಟ್ಟೆ(ಶಂಕರ್ ನಾಗ್) ಮೃತಪಟ್ಟು 18 ವರ್ಷಗಳು ಕಳೆದುಹೋದವು. ದಾವಣಗೆರೆ ಜಿಲ್ಲೆ ಆನಗೋಡು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 1990ರ ಸೆಪ್ಟೆಂಬರ್ 30ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಂಕರ್ ನಾಗ್ ಸಾವನ್ನಪ್ಪಿದ್ದರು. ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿ ಕಾವ್ಯಾ ಅವರು ಗಾಯಗೊಂಡು ಪ್ರಾಣಾಪಯದಿಂದ ಪಾರಾಗಿದ್ದರು.
ಈ ಅಪಘಾತ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು.ಶಂಕರ್ ನಾಗ್ ಅಪಘಾತ ಪ್ರಕರಣವನ್ನು ಕರ್ನಾಟಕ ಉಚ್ಛನ್ಯಾಯಾಲಯದ ವಿಭಾಗೀಯ ಪೀಠ ಇದೀಗ ಇತ್ಯರ್ಥಪಡಿಸಿದೆ. ಶಂಕರ್ ನಾಗ್ ಅವರ ಪತ್ನಿ ಅರುಂಧತಿ ನಾಗ್ ಮತ್ತು ಪುತ್ರಿ ಕಾವ್ಯಾ ಅವರಿಗೆ ರು.21.6 ಲಕ್ಷ ಪರಿಹಾರ ನೀಡುವಂತೆ ಲಾರಿ ಮಾಲೀಕ ಮತ್ತು ವಿಮಾ ಕಂಪನಿಗೆ ಹೈಕೋರ್ಟ್ ಆದೇಶ ನೀಡಿದೆ.
ಈ ಘಟನೆಗೆ ಸಂಬಂಧಿಸಿದಂತೆ ಲಾರಿ ಮಾಲೀಕ ಮತ್ತು ವಿಮಾ ಕಂಪನಿ ವಿರುದ್ಧ ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ (ಎಂಎಸಿಟಿ)ದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಕರಣ ಅರುಂಧತಿ ನಾಗ್ ಮತ್ತು ಕಾವ್ಯಾ ಅವರಿಗೆ ರು.23 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು.
ಎಂಎಸಿಟಿ ನ್ಯಾಯಾಲಯದ ವಿರುದ್ಧ ಅರುಂಧತಿ ನಾಗ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಧೀಶರಾದ ಶ್ರೀಧರ್ ರಾವ್ ಮತ್ತು ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ಪ್ರಕರಣದ ವಿಚಾರಣೆ ನಡೆಸಿ ರು.21.6 ಲಕ್ಷ ಪರಿಹಾರ ನೀಡುವಂತೆ ಲಾರಿ ಮಾಲೀಕ ಮತ್ತು ವಿಮಾ ಕಂಪನಿಗೆ ಆದೇಶ ನೀಡಿದ್ದಾರೆ.
ಶಂಕರನಾಗ್ ಮೃತಪಡುವ ವೇಳೆಗೆ ರಾಜ್ಯದಲ್ಲಿ ಅವರು ಜನಪ್ರಿಯ ನಟರಾಗಿದ್ದರು. ಅವರಿಗೆ ಹೆಚ್ಚಿನ ಸಂಭಾವನೆ ಸಿಗುತ್ತಿತ್ತು. ರು.23 ಲಕ್ಷ ಪರಿಹಾರ ನಮಗೆ ಸಾಲದು, ರು.1.25 ಕೋಟಿ ಪರಿಹಾರ ಕೊಡಿಸಬೇಕೆಂದು ಅರುಂಧತಿ ನಾಗ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಅರುಂಧತಿ ನಾಗ್ ಅವರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿ ಎಂಎಸಿಟಿ ನ್ಯಾಯಾಲಯ ನೀಡಿದ್ದ ಪರಿಹಾರಕ್ಕಿಂತಲೂ ರು.2 ಲಕ್ಷಕಡಿಮೆ ನೀಡುವಂತೆ ಆದೇಶಿಸಿದೆ
ಅನಂತ್ ಬಿಚ್ಚಿಟ್ಟ ಶಂಕರ್ ನಾಗ್ ಸಾವಿನ ರಹಸ್ಯ!
ಸೆಪ್ಟೆಂಬರ್ 30, 1990 ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಕರಾಳ ದಿನ. ಕ್ರಿಯಾಶೀಲ ನಿರ್ದೇಶಕ, ನಟ ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಿನ. ಚಿತ್ರಾಪುರ ಮಠದ ಮಾತಾಜಿ ಅವರು ನಿಮ್ಮ ಪುತ್ರರಲ್ಲೊಬ್ಬನಿಗೆ ವಿಜಯದಶಮಿ ಹಬ್ಬದ ದಿನ ಗಂಡಾಂತರ ಕಾದಿದೆ (''ವಿಜಯ ದಶಮಿಯಂದು ದುರ್ಗೆ ನಿಮ್ಮ ಮನೆಗೆ ಬರುತ್ತಾಳೆ'' ) ಎಂದು ಭವಿಷ್ಯ ನುಡಿದಿದ್ದರಂತೆ. ಹೀಗೆಂದು ಶಂಕರ್ ನಾಗ್ ಅವರ ಸಾವಿನ ರಹಸ್ಯವನ್ನು ಅವರ ಸಹೋದರ, ಹಿರಿಯ ನಟ ಅನಂತನಾಗ್ ಬಿಚ್ಚಿಟ್ಟಿದ್ದಾರೆ.
''ನಮ್ಮ ತಂದೆ ಚಿತ್ರಾಪುರ ಮಠದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಮೃತಪಟ್ಟ ನಂತರ ನಮ್ಮ ತಾಯಿ ಚಿತ್ರಾಪುರ ಮಠದಲ್ಲೇ ಉಳಿದುಕೊಂಡಿದ್ದರು. 1988ರಲ್ಲಿ ವಿಜಯದಶಮಿ ಹಬ್ಬದ ಹಿಂದಿನ ದಿನ ನಮ್ಮ ತಾಯಿ ಕೂಡಲೆ ಮನೆಗೆ ಬರಬೇಕು ಎಂದು ತಿಳಿಸಿದರು. ಹಾಗೆಯೇ ಶಂಕರ್ ನನ್ನು ಜೊತೆಯಲ್ಲಿ ಕರೆತರಲು ತಿಳಿಸಿದ್ದರು. ಇಬ್ಬರೂ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಬರಲು ಸಾಧ್ಯವಿಲ್ಲ ಎಂದು ಅಮ್ಮನಿಗೆ ತಿಳಿಸಿದೆವು. ಆದರೆ ಅಮ್ಮ ಬರಲೇ ಬೇಕು ಎಂದು ಪಟ್ಟು ಹಿಡಿದರು. ಹಾಗಾಗಿ ನಾವು ಹೊರಡಲೇ ಬೇಕಾಯಿತು'' ಎಂದು ಅನಂತ್ ತಮ್ಮ ಹಳೆಯ ನೆನಪುಗಳನ್ನು ಆಂಗ್ಲ ಪತ್ರಿಕೆಯೊಂದರ ಜತೆ ಹಂಚಿಕೊಂಡಿದ್ದಾರೆ.
''ಅವರು ನಮ್ಮನ್ನೇಕೆ ಬಲವಂತ ಮಾಡುತ್ತಿದ್ದಾರೆ. ಬಹುಶಃ ಹಬ್ಬವನ್ನು ನಮ್ಮೊಂದಿಗೆ ಆಚರಿಸಲು ಇರಬೇಕು ಎಂದುಕೊಂಡೆವು. ಆದ ಕಾರಣ ನಾನು ಮತ್ತು ಶಂಕರ್ ಹೊರಟೆವು. ಆದರೆ ನನ್ನನ್ನು ಬೆಂಗಳೂರಿನಲ್ಲೇ ಉಳಿದುಕೊಳ್ಳಲು ತಿಳಿಸಿದ್ದರು. ಕಾರಣ ನಿನಗೆ ಗಂಡಾಂತರ ಇದೆ ನೀನು ಬರುವುದು ಬೇಡ; ಎಲ್ಲೂ ಹೋಗಬೇಡ ಮನೆಯಲ್ಲೇ ಇರು ಎಂದು ಅಮ್ಮ ಆಜ್ಞೆ ಮಾಡಿದ್ದರು. ಹಾಗಾಗಿ 1990ರಲ್ಲಿ ಶಂಕರ್ ತನ್ನ ಪತ್ನಿ ಮತ್ತು ಮಗಳೊಂದಿಗೆ ಹೊರಟು ಅಮ್ಮನ ಜತೆಗೆ ಚಿತ್ರಾಪುರ ಮಠದಲ್ಲೇ ಉಳಿದುಕೊಂಡು ಅಲ್ಲೇ ಹಬ್ಬವನ್ನು ಆಚರಿಸಿಕೊಂಡಿದ್ದ.''
''ಹಬ್ಬ ಮುಗಿದ ಮರುದಿನ ಶಂಕರ್ ಅಮ್ಮನಿಗೆ ಹೇಳದೆ ಕೇಳದೆ ಹೊರಟು ಬಿಟ್ಟಿದ್ದ. ನಂತರ ನನಗೆ ಬಂದ ದೂರವಾಣಿ ಕರೆಯಲ್ಲಿ ಶಂಕರ್ ಗೆ ಅಪಘಾತವಾಗಿದೆ ಎಂದು ತಿಳಿಯಿತು. ನಾನು ಕೂಡಲೆ ಅಮ್ಮನಿಗೆ ಫೋನ್ ಮಾಡಿದೆ, ಅವರು ಆಘಾತಕ್ಕೊಳಗಾಗಿದ್ದರು. ''ನಿನಗಲ್ಲ ಗಂಡಾಂತರ ಇದ್ದದ್ದು ಶಂಕರ್ ಗೆ'' ಎಂದು ಅಮ್ಮ ಕಣ್ಣೀರಿಟ್ಟಿದ್ದರು. ಗಂಡಾಂತರ ಕಾದಿರುವುದು ನನಗೇ ಎಂದು ಅಮ್ಮ ತಪ್ಪಾಗಿ ತಿಳಿದ್ದರು. ನನ್ನನ್ನು ಮನೆಯಲ್ಲೇ ಇರಲು ಹೇಳಿ ಶಂಕರ್ ನನ್ನು ಹಬ್ಬಕ್ಕಾಗಿ ಕರೆಸಿಕೊಂಡಿದ್ದರು'' ಎಂದು ಅನಂತನಾಗ್ ಅಂದಿನ ತಮ್ಮ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಂಡಿದ್ದಾರೆ.
ಬಂದಳೋ ಬಂದಳು ಮತ್ತೊಬ್ಬ ಪಡುಕೋಣೆ
ಕನ್ನಡಕ್ಕೆ ಮತ್ತೊಬ್ಬಳು ಪಡುಕೋಣೆ ಬಂದಿದ್ದಾರೆ. ಹಾಗಂತ ಈಕೆ ಬಾಲಿವುಡ್ನಲ್ಲಿ ಮಿಂಚುತ್ತಿರುವ ದೀಪಿಕಾ ಪಡುಕೋಣೆ ಅವರ ತಂಗಿಯೂ ಅಲ್ಲ ಸಂಬಂಧಿಕರೂ ಅಲ್ಲ. ಬದಲಿಗೆ ಆಕೆಯ ಊರಿನವಳು. ಹೆಸರು ಸಂಚಿತಾ. ನಿರ್ದೇಶಕ ಯೋಗೀಶ್ ಹುಣಸೂರು ಕಟ್ಟಿಕೊಡಲಿರುವ ರಾವಣ ಚಿತ್ರದಲ್ಲಿ ಯೋಗೀಶ್ಗೆ ನಾಯಕಿಯಾಗಿದ್ದಾರೆ.
ಈಕೆ ಈಗಾಗಲೇ ತಮಿಳಿನ ಮುತ್ತಳಗಿ ಎಂಬ ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಂಡಾಗಿದೆ. ಉದಯ್ ಎಂಬಾತ ಅದರ ನಾಯಕ. ಆದಾದ ಬಳಿಕ ಸುಮಾರು ಒಂದು ವರ್ಷ ಅವಕಾಶಕ್ಕಾಗಿ ಕಾದು ಕುಳಿತ ಸಂಚಿತಾಗೆ ಈಗ ರಾವಣ ಸಿಕ್ಕಿದ್ದಾನೆ.
ಇವತ್ತಿನ ದಿನಗಳಲ್ಲಿ ಚಿತ್ರರಂಗ ಎಂದ ಮೇಲೆ ಅಲ್ಲಿ ಎಕ್ಸ್ಪೋಸಿಂಗ್ ದೃಶ್ಯಗಳಿರುವುದು ಸಾಮಾನ್ಯ. ಬರೇ ಗೌರಮ್ಮನ ಪಾತ್ರವೇ ಯಾವತ್ತೂ ಸಿಗೋದಿಲ್ಲ. ಅಗತ್ಯ ಬಿದ್ದಾಗ ಬಿಚ್ಚಮ್ಮನ ಪಾತ್ರಕ್ಕೂ ರೆಡಿನಾ ಎಂದು ಕೇಳಿದರೆ, ಕನ್ನಡದ ಬಹುತೇಕ ಹುಡುಗಿಯರು ಆ ತರಹದ ಪಾತ್ರ ಒಪ್ಪೋದಿಲ್ಲ. ಹಾಗಂತ ನಾನೇನೂ ಎಕ್ಸ್ಪೋಸಿಂಗ್ ಒಪ್ಪಲ್ಲ ಅಂತಲ್ಲ. ಪಾತ್ರ ಯಾವ ತರಹ ಬೇಡುತ್ತೆ ಅನ್ನೋದರ ಮೇಲೆ ಒಪ್ಪಿಕೊಳ್ಳುತ್ತೇನೆ ಎನ್ನುತ್ತಾರೆ ಇವರು. ಏನೇ ಪಾತ್ರ ಮಾಡಿದರೂ ಅದು ಅಶ್ಲೀಲವಾಗಿ ಕಾಣಬಾರದೆಂಬುದು ಸಂಚಿತಾ ಸಿದ್ದಾಂತ.
ಮೊಗ್ಗಿನ ಮನಸು ಚಿತ್ರದ ನಿರ್ದೇಶಕ ಶಶಾಂಕ್ ಅವರನ್ನು ಭೇಟಿಯಾಗಿ ಅವಕಾಶ ಕೇಳಿದ್ದಾರಂತೆ. ಮುಂದಿನ ಚಿತ್ರದಲ್ಲಿ ಅವಕಾಶ ನೀಡುವ ಭರವಸೆಯನ್ನು ಶಶಾಂಕ್ ನೀಡಿದ್ದಾರಂತೆ. ಈಕೆಗೆ ದರ್ಶನ್ ಜೊತೆ ನಾಯಕಿಯಾಗಿ ನಟಿಸಬೇಕೆಂಬ ಆಸೆ ಇದೆಯಂತೆ.
ಓಕೆ ಗುಡ್ಲಕ್